Australia tour of India, 2023 ಬೆಂಗಳೂರಿನಲ್ಲಿ ನಡೆಯುವ ಭಾರತ-ಆಸೀಸ್ ಟಿ20 ಪಂದ್ಯದ ಟಿಕೆಟ್ ಸೇಲ್ ದಿನಾಂಕ ಪ್ರಕಟ
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 5ನೇ ಟಿ20 ಪಂದ್ಯದ ಟಿಕೆಟ್ ಮಾರಾಟ ಆನ್‌ಲೈನ್‌ನಲ್ಲಿ ನವೆಂಬರ್ 25ರಿಂದ ಆರಂಭಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ತಿಳಿಸಿದೆ.
ಬೆಂಗಳೂರು: ಪ್ರವಾಸಿ ಆಸ್ಟ್ರೇಲಿಯಾ(Australia tour of India, 2023) ಮತ್ತು ಭಾರತ ನಡುವೆ ಸಾಗುತ್ತಿರುವ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸಿದೆ. ಇನ್ನು 4 ಪಂದ್ಯಗಳು ಬಾಕಿ ಉಳಿದಿವೆ. ಸರಣಿಯ ಅಂತಿಮ ಪಂದ್ಯ ಡಿ.3ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದ ಟಿಕೆಟ್ ಮಾರಾಟದ ದಿನಾಂಕ ಪ್ರಕಟಗೊಂಡಿದೆ.
ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 5ನೇ ಟಿ20 ಪಂದ್ಯದ ಟಿಕೆಟ್ ಮಾರಾಟ ಆನ್‌ಲೈನ್‌ನಲ್ಲಿ ನವೆಂಬರ್ 25ರಿಂದ ಆರಂಭಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ತಿಳಿಸಿದೆ. ಆನ್‌ಲೈನ್‌ನಲ್ಲಿ ಖರೀದಿಸಿದ ಟಿಕೆಟ್‌ನ ಪ್ರತಿಗಳನ್ನು ನವೆಂಬರ್ 30, ಡಿಸೆಂಬರ್ 1 ಹಾಗೂ ಡಿಸೆಂಬರ್ 2ರಂದು ಕ್ರೀಡಾಂಗಣದ ಬಳಿ ಇರುವ ಕೌಂಟರ್‌ಗಳಲ್ಲಿ ಪಡೆಯಬಹುದು ಎಂದು ಕೆಎಸ್‌ಸಿಎ ಮಾಹಿತಿ ನೀಡಿದೆ. ಕೌಂಟರ್ ಟಿಕೆಟ್ಗಳು ಪಂದ್ಯದ ಒಂದು ದಿನ ಮುಂಚಿತವಾಗಿ ಅಥವಾ ಪಂದ್ಯ ನಡೆಯುವ ದಿನಂದೇ ನೀಡುವ ಸಾಧ್ಯತೆ ಇದೆ. ಇದರ ಬಗ್ಗೆ ಕೆಎಸ್‌ಸಿಎ ಯಾವುದೇ ಮಾಹಿತಿ ನೀಡಿಲ್ಲ. ಸದ್ಯ ಆನ್‌ಲೈನ್ ಟಿಕೆಟ್ ಖರೀದಿ ಬಗ್ಗೆ ಮಾತ್ರ ಮಾಹಿತಿ ನೀಡಿದೆ.
ಪೂರ್ವ ನಿಗದಿಯ ವೇಳಾಪಟ್ಟಿ ಪ್ರಕಾರ 5ನೇ ಟಿ20 ಪಂದ್ಯ ಹೈದರಾಬಾದ್ನಲ್ಲಿ ನಿಗದಿಯಾಗಿತ್ತು. ಆದರೆ ಇಲ್ಲಿ ವಿಧಾನಸಭೆ ಚುನಾವಣೆ ಇರುವ ನಿಟ್ಟಿನಲ್ಲಿ ಪಂದ್ಯವನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಯಿತು. ಹೀಗಾಗಿ ಪಂದ್ಯದ ಆತಿಥ್ಯ ಸಿಕ್ಕಿತು.
ಭಾರತದ ಉಳಿದಿರುವ 4 ಟಿ20 ಪಂದ್ಯಗಳ ವೇಳಾಪಟ್ಟಿ
ದ್ವಿತೀಯ ಟಿ20 ಪಂದ್ಯ. ನ.26, ತಿರುವನಂತಪುರಂ. ಆರಂಭ, ಸಂಜೆ 7 ಗಂಟೆ.
ಮೂರನೇ ಟಿ20, ನ.28,ಗುವಾಹಟಿ. ಆರಂಭ, ಸಂಜೆ 7 ಗಂಟೆ.
ನಾಲ್ಕನೇ ಟಿ20, ಡಿ.1, ರಾಯ್ಪುರ್. ಆರಂಭ, ಸಂಜೆ 7 ಗಂಟೆ.
ಐದನೇ ಟಿ20, ಡಿ.3, ಬೆಂಗಳೂರು. ಆರಂಭ, ಸಂಜೆ 7 ಗಂಟೆ.
ಮೊದಲ ಪಂದ್ಯ ಗೆದ್ದ ಭಾರತ
ಸರಣಿಯ ಮೊದಲ ಪಂದ್ಯ ಗುರುವಾರ ರಾತ್ರಿ ವಿಶಾಖಪಟ್ಟಣದ ವೈ.ಎಸ್.ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಭಾರತ 2 ವಿಕೆಟ್ಗಳ ಅಂತರದ ರೋಚಕ ಗೆಲುವು ಸಾಧಿಸಿತು. ಈ ಮೂಲಕ 1-0 ಮುನ್ನಡೆ ಕಾಯ್ದುಕೊಂಡಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಆಸ್ಟ್ರೇಲಿಯಾ ಜೋಶ್ ಇಂಗ್ಲಿಸ್(110) ಅವರ ಆಕರ್ಷಕ ಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 208 ರನ್ ಗಳಿಸಿತು. ಬೃಹತ್ ಮೊತ್ತವನ್ನು ದಿಟ್ಟವಾಗಿ ಬೆನ್ನಟ್ಟಿಕೊಂಡು ಹೋದ ಭಾರತಕ್ಕೆ ಅಂತಿಮ ಓವರ್ನಲ್ಲಿ ಗೆಲುವಿಗೆ 7 ರನ್ ಬೇಕಿತ್ತು. ಈ ವೇಳೆ ನಾಟಕೀಯ ಕುಸಿತ ಕಂಡ ಭಾರತ ಸತತವಾಗಿ ಮೂರು ವಿಕಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತು. ಕೊನೆಯ ಎಸೆತದಲ್ಲಿ ಗೆಲುವಿಗೆ ಒಂದು ರನ್ ಬೇಕಿದ್ದಾಗ ಆತ್ಮವಿಶ್ವಾಸ ಕಳೆದುಕೊಳ್ಳದ ರಿಂಕು ಸಿಂಗ್ ಸಿಕ್ಸರ್ ಬಾರಿಸಿ ವಿಜಯ ಪತಾಕೆ ಹಾರಿಸಿದರು. ಅಚ್ಚರಿ ಎಂದರೆ ಇದು ನೋಬಾಲ್ ಕೂಡ ಆಗಿತ್ತು. ವಿಕೆಟ್ ಪತನಗೊಂಡರೂ ಭಾರತ ಗೆಲುವು ಸಾಧಿಸುತ್ತಿತ್ತು. ನೋ ಬಾಲ್ ಆದ ಕಾರಣ ಸಿಕ್ಸರ್ನ ಮೊತ್ತ ಪರಿಗಣನೆಗೆ ಬರಲಿಲ್ಲ.
ಮೂಲತಃ ಲೇಖನವನ್ನು ಇಲ್ಲಿ ಪ್ರಕಟಿಸಲಾಗಿದೆ: 👉 Cricket News
ಇಂತಹ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 👉 Kannada News

Comments
Post a Comment